ಕೃತಕ ಮಳೆ
 
ಮೋಡಗಳ ಮೇಲೆ ಕೆಲವು ರಾಸಾಯನಿಕಗಳನ್ನು ಬಿತ್ತುವುದರ (ಸೀಡಿಂಗ್) ಮೂಲಕ ಆ ಮೋಡಗಳು ಘನೀಕರಿಸಿ ನೀರಾಗಿ ಸುರಿಯುವ ವಿದ್ಯಮಾನ (ಆರ್ಟಿಫಿಷಿಯಲ್ ರೇನ್). ಇದರ ಹಿನ್ನೆಲೆಯಲ್ಲಿರುವ ತತ್ತ್ವ ಪ್ರಕೃತಿಯ ಅನುಕರಣೆಯ ಪ್ರಯತ್ನ. ಅಲ್ಲಿ ಮೋಡ ಮಳೆಯಾಗಿ ಸುರಿಯುವ ಮುನ್ನ ಯಾವ ಯಾವ ಹಂತಗಳ ಮೂಲಕ ಸಾಗುತ್ತವೆ ಎಂಬುದನ್ನು ಅಭ್ಯಸಿಸಿ ಅವನ್ನು ಮೋಡಗಳ ಮೇಲೆ ಕೃತಕವಾಗಿ ಪ್ರಯುಕ್ತಿಸಲು ಮಾಡುವ ಏರ್ಪಾಡಿದು. ಬರ್ಫದ ಅಥವಾ ತತ್ಸಮಾನ ನೀರಿನ ದೊಡ್ಡ ತುಣುಕುಗಳ ಇರವು ಮೋಡ ನೀರಾಗಿ ಕರಗುವ ಕ್ರಿಯಾವಿನ್ಯಾಸದ (ಮೆಕ್ಯಾನಿಸಂ) ಚಾಲನೆಗೆ ಅವಶ್ಯವೆಂದು ಕಂಡುಬಂದಿದೆ. ಎಲ್ಲ ಮೋಡಗಳೂ ಮಳೆಯಾಗಿ ಸುರಿಯದಿರಲು ಕಾರಣ ಅಂಥವುಗಳಲ್ಲಿ ಈ ಕ್ರಿಯಾವಿನ್ಯಾಸ ಅದಕ್ಷವಾಗಿರುವುದಾಗಿರಬಹುದೆಂದು ಭಾವಿಸಿದ್ದಾರೆ. ಈ ಆಧಾರಭಾವನೆಯ ಪ್ರಕಾರ, ಮಳೆ ಸುರಿಯುವ ಮೋಡಗಳಲ್ಲಿ, ಕರಗುವ ಕ್ರಿಯಾವಿನ್ಯಾಸಕ್ಕೆ ಒತ್ತಾಸೆ ನೀಡಿದರೆ, ಮಳೆ ಸುರಿಯುವುದು ಸಹಜವಾಗಬೇಕು ಎಂದಾಯಿತು. ಶುಷ್ಕ ಬರ್ಫ ಅಥವಾ ಬೆಳ್ಳಿಯ ಅಯೊಡೈಡನ್ನು ಮೋಡಗಳ ಮೇಲೆ ಚೆಲ್ಲಿದಾಗ, ಕೆಲವು ಸಂದರ್ಭಗಳಲ್ಲಿ ಅವು ಘನೀಕರಿಸಿ ಮಳೆ ಸುರಿದದ್ದು ಉಂಟು. ಶುಷ್ಕ ಬರ್ಫ ವಿಧಾನದಲ್ಲಿ ಸುಮಾರು 1 ಸೆಂಮೀ. ವ್ಯಾಸವಿರುವ ಬರ್ಫದ ತುಣುಕುಗಳನ್ನು ಅತಿಶೈತ್ಯಗೊಂಡಿರುವ ಮೋಡದ ತುತ್ತತುದಿಯಲ್ಲಿ ಎಸೆಯುತ್ತಾರೆ. ಪ್ರತಿಯೊಂದು ತುಣುಕೂ ಅದರ ಆಸುಪಾಸಿನ ವಾಯುವನ್ನು -40ಲಿ ಸೆಂ.ಗಿಂತಲೂ ಕೆಳಗಿನ ಉಷ್ಣತೆಗೆ ಶೀತಲಿಸುತ್ತದೆ. ಈ ಕ್ರಿಯೆಯಲ್ಲಿ ಅದು ಸುಮಾರು 10-12 ಅತಿಸೂಕ್ಷ್ಮ ಬರ್ಫದ ಕಣಗಳನ್ನು ಸಹ ಉಂಟುಮಾಡುವುದೆಂದು ಅಂದಾಜು. ಇವು ಮೋಡದ ಎಲ್ಲೆಲ್ಲೂ ಕ್ರಮೇಣ ಪಸರಿಸಿ, ಬೆಳೆದು, ಹಿಮಚಂಡುಗಳಾಗಿ ವಿಸ್ತರಿಸುತ್ತವೆ. ಇಷ್ಟಾದ ಮೇಲೆಯೂ ನೀರಾಗಿ ಸುರಿಯುವ ಕೃತಕ ಮಳೆಯ ಪರಿಮಾಣ ಗಮನಾರ್ಹವಾದುದೇನೂ ಅಲ್ಲ. ಬರ್ಫ ವಿಧಾನವಿನ್ನೂ ಪ್ರಾರಂಭ ಪ್ರಾಯೋಗಿಕ ಹಂತದಲ್ಲಿದೆ.

ಅಮೆರಿಕದ ಫ್ಲಾರಿಡದಲ್ಲಿ ಒಂದು ಪ್ರಯೋಗವನ್ನು ನಡೆಸಿದರು(1968). ಪ್ರತಿ ಮುಂಜಾನೆ ವಾಯುಮಂಡಲದ ವಿವಿಧ ಮಾಹಿತಿಗಳನ್ನು ಗಣಕಯಂತ್ರಕ್ಕೆ ಉಣಿಸುತ್ತಿದ್ದರು. ಮೋಡಗಳು ಬಹಳ ಎತ್ತರಕ್ಕೆ ಸಹಜವಾಗಿ ವಿಕಸಿಸುವ ಪ್ರವೃತ್ತಿಯುಳ್ಳವು. ಅಥವಾ ಅವು ಭೂರಿ ಬಿತ್ತನೆಗೆ ಒಗ್ಗಲಾರದಂಥವು ಎಂಬ ಉತ್ತರ ಗಣಕದಿಂದ ದೊರೆತಂದು ಪ್ರಯೋಗವನ್ನು ರದ್ದುಮಾಡುತ್ತಿದ್ದರು. ಹೀಗಲ್ಲದ ದಿನಗಳಂದು ಪ್ರಯೋಗವನ್ನು ಮುಂದುವರಿಸುವುದು ಆ ವಿಜ್ಞಾನಿಗಳ ಇಚ್ಛೆ. ಅವರಿಗೆ ಸಕಾಲ ಪ್ರಾಪ್ತವಾದಾಗ 14 ಮೋಡಗಳು ಪ್ರಯೋಗಕ್ಕೆ ದೊರೆತವು. ಪ್ರತಿಯೊಂದು ಮೋಡವನ್ನೂ ಬೆಳ್ಳಿಯ ಅಯೊಡೈಡಿನಿಂದ ಪದೇಪದೇ ಬಂಬಾಯಿಸಿದರು. ಅವರು ಬಳಸಿದ ಈ ರಾಸಾಯನಿಕದ ಒಟ್ಟು ಪರಿಮಾಣ 1,000 ಗ್ರಾಮುಗಳು. ಆದರೆ ಅಷ್ಟು ಮೋಡಗಳ ಪೈಕಿ ಒಂದು ಮಾತ್ರ ಗಮನಾರ್ಹ ಬದಲಾವಣೆಯನ್ನು ಪ್ರದರ್ಶಿಸಿತು. ಅದು ದ್ವಿಗುಣಿತ ಅಥವಾ ತ್ರಿಗುಣಿತವೆನಿಸುವಷ್ಟು ಪರಿಮಾಣದ ಮಳೆಯನ್ನು ಸುರಿಸಿತು.

ಬಿತ್ತಿದ ಮೋಡ ಸುರಿಸುವ ಕೃತಕ ಮಳೆಯ ಮೊತ್ತ ಸಮಾನ ಪರಿಮಾಣದ ಬಿತ್ತದ ಮೋಡ ಸುರಿಸುವ ಸಹಜ ಮಳೆಯ ಮೊತ್ತಕ್ಕಿಂತ ಹೆಚ್ಚೇನೂ ಅಲ್ಲ.  ವಾಸ್ತವಿಕವಾಗಿ ಅವು ಸಾದೃಶ್ಯವಾಗಿರುತ್ತವೆ ಎಂದು ಗಮನಿಸಲಾಗಿದೆ.

ಕೃತಕ ಮಳೆಯ ಈ ತಂತ್ರ ಸುಭದ್ರವಾದದ್ದು ಎಂಬುದು ಇಂದಿನ ನಂಬಿಕೆ. ಆದರೆ ಮೇಘ ಭೌತವಿಜ್ಞಾನದ (ನೋಡಿ- ಭೌತವಿಜ್ಞಾನ) ಸಮಗ್ರ ವಿವರಗಳೂ ತಿಳಿಯದ ವಿನಾ ಭೂರಿ ಪ್ರಮಾಣದಲ್ಲಿ ಮಿತವ್ಯಯದಿಂದ ಯಶಸ್ಸು ಗಳಿಸುವುದು ಬಲು ದೂರದ ಆಸೆ. 									    *
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ